By Suma Bhat
ಸೇರುವ ತಾಣಕಿಂತ ಯಾನವೇ ಬಲು ಸೊಗಸು
ಅನುಭವದ ಸಿರಿಗೆ ತೆರೆದುಕೊಳ್ಳಲು ಮನಸು
ನೀರ ದಾರಿ, ಬಳಸು ಹಾದಿ, ನಡುವೆ ಕಣಿವೆ ಕಂದರ
ಭಿನ್ನ ನೋಟ, ಹೊಸ ವಿಚಾರ ಹೊಸತನವು ಸುಂದರ
ಹಿತವೂ ಅಹಿತವು ಎರಡು ಇದರದೇ ಭಾಗ
ನೋವು ನಲಿವು ನಾಣ್ಯದೆರಡು ಮುಖದ ಹಾಂಗ
ಹಿಂದಿಕ್ಕಿದ ಮೈಲಿಗಲ್ಲು, ಹಳ್ಳಿ ಗ್ರಾಮ ನಗರಗಳು
ಅಪರಿಚಿತ ಜನ, ಅವರ ಹಾವಭಾವ ಭಾಷೆಗಳು
ಕಲಿಯುವ ಮನಕೆ ಜಗದ ಜೀವವೆಲ್ಲ ಗುರುಗಳು
ಶಾಲೆ ಕಲಿಕೆ ಮೀರುವಂತ ಅನುಭವದ ಪಾಠಗಳು
ಒಂದು ಜಾಗ, ಒಂದು ಕೋನ, ಪೂರ್ವಾಗ್ರಹ ಪೀಡಿತ
ನಾನೇ ಸರಿ, ಜಗವೆಲ್ಲ ನ್ಯೂನ ಎಂಬ ಭಾವ ಸಂಕುಚಿತ
ಮನವ ತೆರೆದು ನೋಡಲು ಕಾಣುವುದು ಹೊಸದಿಗಂತ
ಎಲ್ಲ ಅಂಶ ಕರಗುವಂತ ಮಾಯೆಯೇ ಅನಂತ
By Suma Bhat
댓글